ಸಿಂಹ

	ಸ್ತನಿ ವರ್ಗದ ಐದು ಗರ್ಜಿಸುವ ಬೆಕ್ಕುಗಳ ಪೈಕಿ ಒಂದು ಪ್ರಮುಖ ಪ್ರಾಣಿ (ಲಯನ್). ಹುಲಿ, ಚಿರತೆ, ಹಿಮಚಿರತೆ ಹಾಗೂ ಅಮೆರಿಕದಲ್ಲಿ ಕಂಡುಬರುವ ಮಚ್ಚೆಯುಳ್ಳ ಜ್ಯಾಗ್ವಾರ್ ಉಳಿದ ನಾಲ್ಕು. ಪ್ಯಾಥೆರಾಲಿಯೊ ಇದರ ಶಾಸ್ತ್ರೀಯ ನಾಮ. ಸಿಂಹವನ್ನು ವನರಾಜ, ವನ್ಯಪ್ರಾಣಿಗಳ ರಾಜ ಎಂದು ಮುಂತಾಗಿ ಹೇಳುವುದುಂಟು. ಅನಾದಿಕಾಲದಿಂದಲೂ ಇದನ್ನು ವನ್ಯಜೀವಿಯೆಂದೇ ಪರಿಗಣಿಸಲಾಗಿದೆ. ಹಿಂದೆ ಆಫ್ರಿಕ, ಯುರೋಪ್ ಹಾಗೂ ಏಷ್ಯಖಂಡಗಳ ಹಲವಾರು ಕಡೆ ಸಿಂಹಗಳು ವಾಸಿಸುತ್ತಿದ್ದರೂ ಇಂದು ಇವು ಮುಖ್ಯವಾಗಿ ಆಫ್ರಿಕದ ಸಹಾರ ಪ್ರದೇಶದ ದಕ್ಷಿಣ ಭಾಗ ಹಾಗೂ ಏಷ್ಯದ ಕೆಲವೇ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಭಾರತದ ಗುಜರಾತ್ ರಾಜ್ಯದ ಗಿರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಇವನ್ನು ಸಂರಕ್ಷಿಸಲಾಗುತ್ತಿದೆ. ಇಂದು  ಉಷ್ಣವಲಯದಲ್ಲಿ ಕಂಡುಬಂದರೂ ಇವುಗಳ ಉಗಮ ಸಮಶೀತೋಷ್ಣವಲಯದಲ್ಲಿ ಆಗಿತ್ತೆಂದು ದಾಖಲೆಗಳು ತಿಳಿಸುತ್ತವೆ.

	ಸಿಂಹದ ದೇಹ ಬಲಿಷ್ಠ ಮತ್ತು ದಷ್ಟಪುಷ್ಟ. ನೀಳಕಾಯವಾಗಿರುವುದ ರಿಂದ, ಕಾಡಿನಲ್ಲಿ ನಿಶ್ಶಬ್ದವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಬಲ್ಲದು. ಪ್ರೌಢಾವಸ್ಥೆಯಲ್ಲಿ ಇದರ ತೂಕ ಸು. 210 ಕಿ.ಗ್ರಾಮ್. 3 ಮೀ ಉದ್ದ, 90 ಸೆಂಮೀ ಎತ್ತರ ಬೆಳೆಯುತ್ತದೆ. ಸಾಮಾನ್ಯವಾಗಿ ಹೆಣ್ಣು ಸಿಂಹ ಗಾತ್ರದಲ್ಲಿ ಗಂಡಿಗಿಂತ ಸ್ವಲ್ಪ ಚಿಕ್ಕದಾಗಿರುತ್ತದೆ (ಸು. 75 ಸೆಂಮೀ ಎತ್ತರ, 180 ಕಿ.ಗ್ರಾಮ್ ತೂಕ). ಗಂಡು ಸಿಂಹದ ಕುತ್ತಿಗೆ ಮೇಲೆ ಉದ್ದ ಕೂದಲು (ಕೇಸರ) ಇರುವುದರಿಂದ ಅದು ಭಯಾನಕವಾಗಿ ಕಾಣುತ್ತದೆ. ಅಲ್ಲದೇ ಹುಲಿಗಿಂತ ದೊಡ್ಡ ಗಾತ್ರದ್ದಾಗಿ ಭಾಸವಾಗುತ್ತದೆ. ಸಿಂಹದ ಮೈಯ ಬಣ್ಣ ಮರಳಿನಂತೆ ತಿಳಿಹಳದಿಯಿಂದ ಗಾಢ ಕಂದಿನವರೆಗೆ ಇದೆ. ಕಿವಿಗಳು ಕಪ್ಪಾಗಿದ್ದು, ತೆಳ್ಳನೆಯ ತುಪ್ಪಳ ಮೈಯನ್ನು ಆವರಿಸಿವೆ. ಬಾಲ ಉದ್ದವಿದ್ದು ತುದಿಯಲ್ಲಿ ಕೂದಲಿನ ಒಂದು ಗುಚ್ಛವಿದೆ. ಇದರ ಬಣ್ಣ ಮೈ ಬಣ್ಣಕ್ಕಿಂತ ಗಾಢ ಕಂದು. ಮುಂಗಾಲುಗಳು ಬಲಿಷ್ಠ. ಹುಲಿಯ ಕಾಲುಗಳಿಗೆ ಹೋಲಿಸಬಹುದು. ಸಿಂಹ ಜಿûೀಬ್ರಾದಂಥ ಪ್ರಾಣಿಯನ್ನು ತನ್ನ ಪಂಜದ ಒಂದೇ ಹೊಡೆತದಿಂದ ಕೊಲ್ಲಬಲ್ಲದು. ಸಿಂಹವೂ ಬೆಕ್ಕಿನಂತೆ ತನ್ನ ಅಂಗಾಲಿನ ಉಗುರುಗಳನ್ನು ಹೊರಕ್ಕೆ ಚಾಚಬಲ್ಲದು. ಹುಲಿಯಂತೆ ಜಿಗಿಯುವುದು. ಸಿಂಹ ಸು. 3 ಮೀ ಎತ್ತರ ಮತ್ತು 11 ಮೀ ಉದ್ದ ಜಿಗಿದ ದಾಖಲೆ ಉಂಟು. ಬಾಲ್ಯಾವಸ್ಥೆಯಲ್ಲಿ ಸಿಂಹ ಮರ ಏರಬಲ್ಲದು. ಪ್ರಾಯಸ್ಥ ಸಿಂಹದ ಜಗ್ಗು (ಎಳೆತದ) ಬಲ ಸು. 10 ವ್ಯಕ್ತಿಗಳ ಒಟ್ಟು ಜಗ್ಗುಬಲಕ್ಕೆ ಸಮಾನ.

	ಸಿಂಹಗಳಲ್ಲಿಯ ಕೇಸರದ ವಿನ್ಯಾಸವೂ ವಿಭಿನ್ನ. ಕೆಲವೊಂದರಲ್ಲಿ ಅದು ಕೇವಲ ಮುಖದ ಅಂಚಿನಲ್ಲಷ್ಟೆ ಕಂಡುಬರಬಹುದು, ಮುಖವನ್ನು ಸಂಪೂರ್ಣವಾಗಿ ಆವರಿಸಿರಬಹುದು ಅಥವಾ ಕೇಸರವೇ ಇಲ್ಲದಿರಬಹುದು. ಅಲ್ಲದೇ ಕೆಲವೊಮ್ಮೆ ಈ ಕೇಸರ ತಲೆಯ ಮೇಲುಭಾಗ, ಕುತ್ತಿಗೆಯ ಕೆಳಭಾಗವನ್ನು ಆವರಿಸಬಹುದು. ಕೆಲವು ಸಿಂಹಗಳಲ್ಲಿ ಕೇಸರದ ಹೊರತುದಿ ಗಾಢ ಬಣ್ಣದ್ದಾಗಿದ್ದು, ಸಿಂಹಕ್ಕೆ ಗಾಂಭೀರ್ಯ ನೀಡುತ್ತದೆ. ಪ್ರಾಣಿಸಂಗ್ರಹಾಲಯದ ಪರಿಸರದಲ್ಲಿಯ ಸಿಂಹಕ್ಕೆ ನೈಸರ್ಗಿಕ ಸಿಂಹದಂತೆ ಮುಳ್ಳು, ಪೊದೆ, ಕುರುಚಲು ಪ್ರದೇಶಗಳಲ್ಲಿ ದೂರ ಸಾಗಬೇಕಿಲ್ಲವಾದ್ದರಿಂದಲೂ ತನ್ನ ಆಶ್ರಯ ಸ್ಥಾನದಲ್ಲಿ ಸಂಗಾತಿಯನ್ನೂ ಪಡೆಯನ್ನೂ ರಕ್ಷಿಸಲು ಇತರ ಸಿಂಹಗಳೊಡನೆ ಕಾದಾಡಬೇಕಾದ ಪರಿಸ್ಥಿತಿ ಇಲ್ಲದ್ದರಿಂದಲೂ ಅದರ ಕೇಸರ ಉದ್ದವಾಗಿರುವುದು.

	ಸಿಂಹದ ಅಸ್ಥಿಪಂಜರ ಬೆಕ್ಕುಗಳಂತೆಯೇ ಇದೆ. ತಲೆಬುರುಡೆ ಮಾತ್ರ ಹುಲಿಯದಕ್ಕಿಂತಲೂ ದೊಡ್ಡದು. ಕಣ್ಣುಗಳ ಬಣ್ಣ ಹಳದಿ, ದುಂಡಗಿನ ಕಣ್ಣುಗೊಂಬೆ. ಆದರೆ ಇತರ ಬೆಕ್ಕಿನ ಜಾತಿಯ ಪ್ರಾಣಿಗಳಲ್ಲಿ, ಈ ಕಣ್ಣುಗೊಂಬೆಯಲ್ಲಿ ಒಂದು ಸೀಳಿನಂತೆ ಬಿಂಬವಿರುವುದು. ಸಿಂಹದ ದವಡೆ ಮೂಳೆಗಳು ಬಲಿಷ್ಠ, ದೃಢವಾಗಿವೆ. ನಾಲಗೆಯ ಮೇಲೆ ಚಿಕ್ಕಚಿಕ್ಕ ಗುಳ್ಳೆಯ ಆಕಾರಗಳಿವೆ. ಮಾಂಸ ಅಥವಾ ರಕ್ತ ನೆಕ್ಕಲು ಇವು ಸಹಕಾರಿ.

	ಸಿಂಹಕ್ಕೆ ಯಾವುದೇ ನಿರ್ದಿಷ್ಟ ಪ್ರಜನನ ಪ್ರಾಯವಿಲ್ಲ. ಆದ್ದರಿಂದ ಅದು ವರ್ಷ ಪೂರ್ತಿ ಸಂತಾನಾಭಿವೃದ್ದಿ ಮಾಡಬಲ್ಲದು. ಸಿಂಹದಲ್ಲಿ ಗರ್ಭಧಾರಣಾವಧಿ ಸು. 105 ದಿವಸಗಳು. ಇದರ ಕೊನೆಯಲ್ಲಿ 2 ಅಥವಾ 3 ಮರಿಗಳನ್ನು ಈಯುತ್ತದೆ. ಕೆಲವೊಮ್ಮೆ 6 ಮರಿಗಳೂ ಹುಟ್ಟುವುದುಂಟು. ನೈಸರ್ಗಿಕವಾಗಿ ಸಿಂಹ 2 ವರ್ಷಗಳಿಗೊಮ್ಮೆ ಗರ್ಭಧರಿಸುತ್ತದೆ, ಪ್ರಾಣಿಸಂಗ್ರಹಾಲಯದಲ್ಲಿ ಪ್ರತಿವರ್ಷವೂ ಗರ್ಭ ಧರಿಸಬಲ್ಲದು.

	ಮರಿ ಹುಟ್ಟುವಾಗ ಅದರ ಉದ್ದ ಸು. 30 ಸೆಂಮೀ, ತೂಕ 500 ಗ್ರಾಮ್. ಪೂರ್ಣ ತುಪ್ಪಳವಿರುವುದು, ಮೈಮೇಲೆ ಬೂದು ಬಣ್ಣದ ಚುಕ್ಕೆಗಳಿರುವುವು. ಬಾಲ ದಪ್ಪವಿದ್ದರೂ ಅದರ ತುದಿಯಲ್ಲಿ ರೋಮಗುಚ್ಛ ಇರುವುದಿಲ್ಲ. ಹುಟ್ಟಿ ಸು. 2 ವಾರ ಪರ್ಯಂತ ಪೂರ್ಣಪ್ರಮಾಣದ ದೃಷ್ಟಿ ಬೆಳೆದಿರುವುದಿಲ್ಲ. ಹುಟ್ಟುವಾಗ ಮರಿಯ ಕಣ್ಣುಗಳು ಬೆಕ್ಕಿನಂತೆ ಮುಚ್ಚಿರುತ್ತವೆಯೇ ಇಲ್ಲವೇ ಎಂಬುದು ಸಂಶಯಾಸ್ಪದ. ಸು. 3 ವಾರಗಳಲ್ಲಿ ಹಲ್ಲು ಮೊಳೆತು ಬೆಳೆಯಲಾರಂಭಿಸುತ್ತದೆ. ಸು. 6 ತಿಂಗಳ ತನಕ ತಾಯಿಯ ರಕ್ಷಣೆಯಲ್ಲೇ ಬೆಳೆದು, ತರುವಾಯ ತಾಯಿಯೊಂದಿಗೆ ಮರಿಗಳೂ ಬೇಟೆಯಾಡಲು ಪ್ರಾರಂಭಿಸುವುವು. ಸು. 11/2 - 2 ವರ್ಷ ವಯಸ್ಸಿನ ಸಿಂಹಗಳು ಸ್ವತಂತ್ರವಾಗಿ ಜೀವಿಸಬಲ್ಲವು. 3-4 ವರ್ಷ ಪ್ರಾಯದವು  ಪ್ರೌಢಾವಸ್ಥೆಗೆ ಬಂದು ಸಂತಾನೋತ್ಪತ್ತಿಗೆ ಅಣಿಯಾಗುತ್ತವೆ. ನೈಸರ್ಗಿಕವಾಗಿ ಕಾಡಿನಲ್ಲಿ ಸಿಂಹಗಳು 10 ವರ್ಷ ಕಾಲ ಬಾಳುತ್ತವೆ. ಪ್ರಾಣಿಸಂಗ್ರಹಾಲಯದಲ್ಲಿ ಈ ಅವಧಿ 25 ವರ್ಷಗಳ ತನಕವೂ ವ್ಯಾಪಿಸಬಹುದು.

	ಯಾವುದೇ ಪ್ರಾಣಿಯನ್ನು ಕೊಂದೊಡನೆ ಸಿಂಹ ಮೊದಲಿಗೆ ಅದರ ಕರುಳನ್ನು ತಿನ್ನತೊಡಗುವುದು. ಕರುಳಿನಲ್ಲಿ ಅರೆಜೀರ್ಣವಾದ ಸಸ್ಯಾಹಾರವಿರುವುದರಿಂದ ಸಿಂಹಕ್ಕೆ ಅವಶ್ಯವಾದ ಜೀವಸತ್ತ್ವ ಒದಗುವುದೆಂಬುದು ಗಮನಾರ್ಹ. ಕರುಳನ್ನು ಕಬಳಿಸಿದ ಬಳಿಕ, ಸಿಂಹ ತನ್ನ ಬೇಟೆಯ ಪೃಷ್ಠಭಾಗದ ಮಾಂಸಯುಕ್ತ ಭಾಗವನ್ನು ಮುಕ್ಕುತ್ತದೆ. ಬೇಟೆಯಾಡುವಾಗ ಸಿಂಹ ಮುಖ್ಯವಾಗಿ ತನ್ನ ಮುಂಗಾಲಿನ ಪಂಜದಿಂದ ಹೊಡೆದು ಅಥವಾ ಮುಂಗಾಲಿನಲ್ಲಿರುವ ಮೊನಚು ಉಗುರುಗಳಿಂದ ಬೇಟೆಯ ಮೂಗಿನ ಹೊಳ್ಳೆಗಳನ್ನು ಸೀಳಿ, ಕತ್ತು ಕೊಯ್ದು ಅದನ್ನು ಸಾಯಿಸುತ್ತದೆ. ಸಿಂಹ ಸದಾ ತನ್ನ ಬೇಟೆಯನ್ನು ನೆಲಕ್ಕೆ ಕೆಡವಿ ಕೊಲ್ಲುವ ವಿಧಾನವನ್ನೇ ಅನುಸರಿಸುತ್ತದೆ. ಇದಕ್ಕಾಗಿ ಅದು ಬೇಟೆಯ ಬೆನ್ನಟ್ಟಿ ಅದರ ಹಿಂಭಾಗ ಹಿಡಿದು, ನೆಲಕ್ಕೆ ಬೀಳಿಸಿ ಮುಂದಿನ ಕಾರ್ಯಕ್ಕೆ ಸಿದ್ಧವಾಗುತ್ತದೆ. ಕಿರಿಯ ಸಿಂಹಗಳು ಈ ಎಲ್ಲ ತಂತ್ರಗಳಲ್ಲಿಯೂ ನೆರವಾಗುತ್ತವೆ. ಬೇಟೆಯಲ್ಲಿ ಪ್ರಮುಖ ಪಾತ್ರವಹಿಸುವುದು ಸಾಮಾನ್ಯವಾಗಿ ಹೆಣ್ಣು ಸಿಂಹಗಳೇ. ಜಿûೀಬ್ರಾ, ಜಿಂಕೆ, ಜಿರಾಫೆ, ಕಾಡುಕೋಣಳನ್ನು ಸಿಂಹ ಇಷ್ಟಪಡುತ್ತದೆ. ಇವು ದೊರಕದ ಸಮಯದಲ್ಲಿ ಕೀಟಗಳನ್ನೂ ಮೀನುಗಳನ್ನೂ ತಿನ್ನಬಲ್ಲದು.

	ಸಿಂಹ ಒಂದು ಸಂಘ ಜೀವಿ. ಸಾಮಾನ್ಯವಾಗಿ, ಒಂದು ಗುಂಪಿನಲ್ಲಿ ಒಂದು ಗಂಡು, ಒಂದು ಅಥವಾ ಎರಡು ಹೆಣ್ಣುಸಿಂಹಗಳು ಹಾಗೂ ಮರಿಗಳಿರುತ್ತವೆ. ಕೆಲವೊಮ್ಮೆ ಎರಡು ಗುಂಪುಗಳು ಒಂದಾಗಿ ಬಾಳುವುದೂ ಉಂಟು. ಗುಂಪಿನ ನಾಯಕಪಟ್ಟ ದೈಹಿಕ ತ್ರಾಣದಿಂದಲೇ ಲಭಿಸುವುದಾಗಿದೆ. ಯಾವುದೇ ಒಂದು ಗುಂಪಿನ ನಾಯಕ ಮುದಿಯಾದರೆ ಅಥವಾ ಗುಂಪಿಗೆ ಬೇಡವಾದರೆ ಆ ಸಿಂಹ ಬೇರೆ ಎಳೆ ಸಿಂಹಗಳ ಜೊತೆ ಸೇರಿಕೊಳ್ಳುವುದು.

	ಸಿಂಹದ ಬಗೆಗಿನ ಬಹಳಷ್ಟು ಮಾಹಿತಿ ವಿಚಾರಗಳು ಊಹಾಪೋಹಗಳು. ಅದನ್ನು ಮರುಭೂಮಿಯ ಪಳಗಿದ ನಿವಾಸಿ, ಕಾಡಿನ ರಾಜನೆಂದು ಕರೆದರೂ ನಿಜವಾಗಿ ಅದು ದಟ್ಟ ಕಾಡಿನಲ್ಲಿ ವಾಸಿಸುವುದಿಲ್ಲ, ಕುರುಚಲು ಮತ್ತು ಪೊದೆಗಳಿಂದ ತುಂಬಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಅದೇ ರೀತಿ ಬೇಟೆಯಾಡುವ ಮುನ್ನ ಸಿಂಹ ಗರ್ಜಿಸಿ ಎದುರಾಳಿಗೆ ತನ್ನ ಬರುವಿಕೆಯನ್ನು ತಿಳಿಸುತ್ತದೆಂದು ಹೇಳಿದರೂ ಇದು ವಾಸ್ತವ ಸಂಗತಿ ಅಲ್ಲ.

	ಇತರ ಗರ್ಜಿಸುವ ಬೆಕ್ಕುಗಳಿಗಿಂತ ಅಧಿಕವಾಗಿ ಸಿಂಹ ಗರ್ಜಿಸಿದರೂ ಇದು ತನ್ನ  ಆಡಳಿತ ಪ್ರದೇಶವನ್ನು ಇತರ ಪ್ರಾಣಿಗಳಿಗೆ ತಿಳಿಯಲೋಸುಗ ಊದುವ ಕಹಳೆ ಮಾತ್ರ! ನಾಯಕ ಸಿಂಹ ತನ್ನ ಪರಿವಾರದೊಂದಿಗೆ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳುವಾಗ, ಸಂಗಾತಿಯನ್ನು ಮೆಚ್ಚಿಸಲು ಬಯಸಿದಾಗ, ಮರಿಗಳೊಂದಿಗೆ ಆಡುತ್ತಿರುವಾಗ, ಇಲ್ಲವೇ ಜಗಳಕ್ಕೆ ಅಣಿಗೊಳ್ಳುತ್ತಿರುವಾಗ ಬೇರೆ ಬೇರೆ ತೆರನಾಗಿ ಗರ್ಜಿಸುತ್ತದೆ.	ಸಿಂಹ ಸ್ವಂತ ವಲಯದೊಳಗೆ ದಿನಕ್ಕೆ ಸು. 5ಕಿಮೀ ನಡೆದಾಡುತ್ತದೆ. ಅಗತ್ಯವಾದರೆ ಒಂದೇ ರಾತ್ರಿ 48 ಕಿಮೀ ದೂರವನ್ನೂ ಕ್ರಮಿಸುವುದುಂಟು. ಓಡುತ್ತಿರುವಾಗಲೇ ದಿಕ್ಕನ್ನು ಬದಲಾಯಿಸುವುದರಲ್ಲಿ ಸಿಂಹ ಬಲು ನಿಸ್ಸೀಮ.

	ತಳಿವಿಜ್ಞಾನಿಗಳು ಸಿಂಹ ಮತ್ತು ಹುಲಿಗಳನ್ನು ಒಂದುಗೂಡಿಸಿ ಲೈಗರ್ ಹಾಗೂ ಚಿರತೆ ಮತ್ತು ಸಿಂಹಗಳನ್ನು ಒಂದುಗೂಡಿಸಿ ಲೆಪೋನ್ ಎಂಬ ಮಿಶ್ರ ತಳಿ ಸೃಷ್ಟಿಸಿದ್ದಾರೆ. 

	ಇಂದಿನ ಪರಿಸರ ಮಾಲಿನ್ಯ, ಕಾನನದ ಸತತ ನಿರ್ಮೂಲನೆ, ಮಾನವನ ನೀತಿರಹಿತ ತಪ್ಪು ನಡವಳಿಕೆ, ಸಿಂಹದ ಬಗೆಗಿನ ಮಿಥ್ಯಾರೋಪಗಳಿಂದ ಸಿಂಹಗಳ ಪರಿಸರ ನಾಶವಾಗತೊಡಗಿದೆ. ಇದಲ್ಲದೇ ಸಿಂಹಗಳನ್ನು ಸರ್ಕಸ್, ಪ್ರಾಣಿಸಂಗ್ರಹಾಲಯಗಳಲ್ಲಿ ಬಳಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅವನ್ನು ಸೆರೆಹಿಡಿಯುತ್ತಿದ್ದಾರೆ. ಹೀಗಾಗಿ ಅವುಗಳ ಸಂಖ್ಯೆ ಗಣನೀಯವಾಗಿ ಇಳಿಮೊಗವಾಗಿದೆ. ಇದರಿಂದಾಗಿ ಕೇಪ್ ಸಿಂಹ, ಬಾರ್ಬರಿ ಸಿಂಹಗಳ ತಳಿ ಸಂಪೂರ್ಣ ನಿರ್ನಾಮವಾಗಿದೆ. ಆದರೂ ಇಂದಿನ ಅಭಯಾರಣ್ಯಗಳಲ್ಲಿ ಅವು ಸ್ವಲ್ಪಮಟ್ಟಿಗೆ ಸುರಕ್ಷಿತವಾಗಿವೆ.
									
	(ಐ.ಕೆ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ